ಚಿತ್ರರಂಗದಲ್ಲಿ ಗಾಸಿಪ್ಗಳು ಸರ್ವೇಸಾಮಾನ್ಯ ಹಾಗಂತೆ, ಹೀಗಂತೆ, ಹೇಗೇಗೋ ಅಂತೆ, ಈ ರೀತಿ ನಾನಾ ತರದ ಗಾಳಿ ಸುದ್ದಿಗಳು ಗಾಂಧಿನಗರದಲ್ಲಿ ಯಾವಾಗಲೂ ಹರಿದಾಡುತ್ತಿರುತ್ತವೆ. ಈ ಸುದ್ದಿಗಳಿಗೆ ಸಂಬಂಧಪಟ್ಟವರು ತಮ್ಮ ಅಭಿಪ್ರಾಯವನ್ನು ಜನರಿಗೆ ತಿಳಿಸುವುದಕ್ಕೆ ಜೀ ಟಿವಿಯಲ್ಲಿ ಒಂದು ರಿಯಾಲಿಟಿ ಶೋ ಪ್ರಾರಂಭವಾಗುತ್ತಿದೆ. ರಗಳೆ ವಿಥ್ ರಿಷಿಕಾ ಹೆಸರಿನ ಈ ಟಾಕ್ ಷೋ ಇದೇ ಸೆಪ್ಟೆಂಬರ್ ೮ ರಿಂದ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ರಾತ್ರಿ ೮ ರಿಂದ ೯ ರವರೆಗೆ ಪ್ರಸಾರವಾಗಲಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಿಷಿಕಾಸಿಂಗ್ ನಾನು ಹುಟ್ಟಿದಾಗಿನಿಂದಲೂ ಚಿತ್ರರಂಗದಲ್ಲೇ ಬೆಳೆದವಳು. ಎಲ್ಲಾ ಕಲಾವಿದರನ್ನು ತುಂಬಾ ಹತ್ತಿರದಿಂದಲೇ ಕಂಡವಳು. ಹಾಗಾಗಿ ಗಾಸಿಪ್ಗಳಿಗೆ ಆಹಾರವಾದ ಕೆಲ ಕಲಾವಿದರನ್ನು ನನ್ನ ಟಾಕ್ ಷೋನಲ್ಲಿ ಕರೆಸಿ ಅವರ ಜೊತೆ ಕೆಲ ಹೊತ್ತು ಹರಟೆ, ಮಾತುಕತೆ ನಡೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಅವರ ಮನದಲ್ಲಿ ಏನಿದೆ, ಅವರು ವೀಕ್ಷಕರಿಗೆ ಏನನ್ನು ಹೇಳಬಯಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ನಿರೂಪಿಸುವ ಪ್ರಯತ್ನ. ಇಂಥದ್ದೊಂದು ಯೋಚನೆ ನನ್ನ ತಲೆಯಲ್ಲಿ ಬಂದಕೂಡಲೇ ಜೀ ಟಿವಿ ತರುಣ್ಗೆ ತಿಳಿಸಿದೆ. ನಾನು ನಿರೂಪಕಿ ಖಂಡಿತ ಅಲ್ಲ. ಜಸ್ಟ್ ಟಾಕ್ ವಿಥ್ ಆರ್ಟಿಸ್ಟ್ ಅಷ್ಟೆ. ನಮ್ಮ ತಾರೆಯರ ರಿಯಲ್ ರೂಪವನ್ನು ತೆರೆದಿಡುವ ಒಂದು ಪ್ರಯತ್ನ ಎಂದು ಈ ಟಾಕ್ ಷೋ ನ ರೂಪುರೇಷೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ನನ್ನ ಹೆಸರಿನ ಜೊತೆಗೇ ರಗಳೆ ಎಂಬ ಪದ ಮೊದಲಿಂದಲೂ ಅಂಟಿಕೊಂಡು ಬಿಟ್ಟಿದೆ. ಹಾಗಾಗಿ ಇದೇ ಟೈಟಲ್ ಸೂಕ್ತ ಎಂದು ನಾನೇ ಸೂಚಿಸಿದೆ. ಅಲ್ಲದೆ ಇದರಲ್ಲಿ ಸ್ಕ್ರಿಪ್ಟ್ ಮಾಡಿಕೊಂಡು ಮಾತನಾಡುವುದು ಕಷ್ಟ. ಲೋಕಾಭಿರಾಮವಾಗಿ ಗೆಳಯ-ಗೆಳತಿಯರ ಜೊತೆ ಒಂದಷ್ಟು ವಿಷಯಗಳನ್ನು ಹರಟುತ್ತೇನೆ, ಕೆದಕುತ್ತೇನೆ ಎಂದು ರಿಷಿಕಾ ಶೀರ್ಷಿಕೆ ಹಾಗೂ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ನಿರ್ದೇಶಕ ತರುಣ್ ಮಾತನಾಡಿ ಮೊದಲು ಈ ಕಾರ್ಯಕ್ರಮಕ್ಕೆ ಕಾಫಿ ವಿಥ್ ರಿಷಿಕಾ ಎಂದು ಶೀರ್ಷಿಕೆ ಇಡಬೇಕು ಎಂದುಕೊಂಡಿದ್ದೆವು. ನಂತರ ರಿಷಿಕಾ ಅವರೇ ರಗಳೆ ಟೈಟಲ್ ಸೂಚಿಸಿದರು. ಈಗಾಗಲೇ ೨-೩ ಸಂಚಿಕೆಗಳನ್ನು ಚಿತ್ರೀಕರಿಸಿದ್ದೇವೆ. ರಿಷಿಕಾ ತುಂಬಾ ಪ್ರಿಪೇರ್ ಆಗಿದ್ದಾರೆ. ಅವರು ಕಲಾವಿದರಿಗೆ ಯಾವುದೇ ಪ್ರಶ್ನೆ ಕೇಳಿದರೂ ಬೇಸರ ಪಟ್ಟುಕೊಳ್ಳದೆ ಉತ್ತರಿಸಿದರು ಎಂದು ಹೇಳಿದರು.
ಪರಮೇಶ್ ಗುಂಡ್ಕಲ್ ಮಾತನಾಡುತ್ತ ರಿಷಿಕಾ ಅವರಿಗಿರುವ ಇಮೇಜನ್ನು ಟೈಟಲ್ನಲ್ಲಿ ತೋರಿಸಿದ್ದೇವೆ. ವೀಕ್ಷಕರಿಗೆ ವೀಕೆಂಡ್ನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಕೊಡಬೇಕೆಂಬ ಉದ್ದೇಶದಿಂದ ಶನಿವಾರ-ಭಾನುವಾರ ರಾತ್ರಿ ೮ ರಿಂದ ೯ ರಿಷಿಕಾ ಕಾರ್ಯಕ್ರಮ, ೯ ರಿಂದ ೧೦ ಸರಿಗಮಪ ಹಾಗೂ ೧೦ ರಿಂದ ೧೧ ಕ್ರೈಂ ಫೈಲ್ ಹೀಗೆ ೩ ಗಂಟೆಗಳ ಕಾಲ ವೀಕ್ಷಕರನ್ನು ಹಿಡಿದಿಡುವ ಪ್ರಯತ್ನ ನಮ್ಮದಾಗಿದೆ ಎಂದರು.